ಕ್ರಷರ್ಗಳು ರೈತರ ಅನ್ನ ಕಸಿಯಲಿವೆಯೇ?
ಕ.ಪ್ರ.ವಾರ್ತೆ ಟಿ ಮುದಗಲ್ ಟಿ ಅ.21
ಪಟ್ಟಣದ ಹೊರವಲಯದ ಸರ್ಕಾರಿ ಸ್ವಾಮ್ಯದ (ಮೈಸೂರು ಮಿನಿರಲ್ ಲಿಮಿಟೆಡ್) ಸರ್ವೇ ನಂ.204 ರಲ್ಲಿರುವ 96 ಎಕರೆ ಜಮೀನಲ್ಲಿ ಖಾಸಗಿ ವ್ಯಕ್ತಿಗಳಿಗೆ ಕಂಕರ್ (ಜಲ್ಲಿ) ಯಂತ್ರಗಳನ್ನು ಅಳವಡಿಸಲು ಭೂ ಬಾಡಿಗೆ ಆಧಾರದ ಮೇಲೆ ನೀಡಿರುವುದನ್ನು ಸುತ್ತಮುತ್ತಲಿನ ಜಮೀನುಗಳ ರೈತರು, ಪರಿಸರ ಚಿಂತಕರು ವಿರೋಧಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ 96 ಎಕರೆ ಜಮೀನಲ್ಲಿ ಜಿಲ್ಲೆಯ 18 ಕ್ರಷರ್ ಯಂತ್ರಗಳ ಮಾಲಿಕರಿಗೆ ಪ್ರತಿ ವರ್ಷ 50000 ದಂತೆ ಭೂ ಬಾಡಿಗೆ ನೀಡಿ ತಲಾ 2 ಎಕರೆ ಜಮೀನು ಸರ್ವೇ ಮಾಡಿ ನೀಡಲಾಗಿದೆ. ಇದರಿಂದ ಈ ಜಮೀನಿನ ಕೆಳಭಾಗದ ರೈತರ ಜಮೀನಿನಲ್ಲಿ ಬೆಳೆ ಬೆಳೆಯದಂತಾಗುತ್ತದೆ. ಧೂಳಿನಿಂದ ಇಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗುಡ್ಡದ ಕೆಳಭಾಗದಲ್ಲೇ ಸರ್ಕಾರಿ ಶಾಲೆ ಇದೆ. ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಪಾಠ ಮಾಡಲು ಶಬ್ಧಮಾಲಿನ್ಯ ಸಮಸ್ಯೆಯಾಗಲಿದೆ. ಕುಡಿಯುವ ನೀರು ಕಲುಷಿತಗೊಳ್ಳುತ್ತದೆ ಎಂದು ರೈತರು ಆತಂಕಗೊಂಡಿದ್ದಾರೆ.
ಪಟ್ಟಣದ ಹೊರವಲಯದಲ್ಲಿ ಏಕೈಕ ಕಂಕರ್ ಯಂತ್ರ ಇದ್ದುದರಿಂದಲೇ ಸುತ್ತಮುತ್ತಲಿನ ಜಮೀನಲ್ಲಿ ಬೆಳೆ ಬೆಳೆಯದಾಗಿದೆ. ಈಗ 18 ಯಂತ್ರಗಳು ಒಂದು ಕಡೆ ಆರಂಭವಾದರೆ ಸುತ್ತಮುತ್ತ 2 ಕಿ.ಮೀ. ಜಮೀನುಗಳು ಪಾಳು ಬೀಳುತ್ತವೆ. ಜಮೀನಲ್ಲಿ ಬೆಳೆದ ಬೆಳೆಗೆ ಧೂಳು ಮೆತ್ತಿಕೊಂಡು ಬೆಳೆ ನಾಶವಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ರೈತರ ಸಭೆ: ಮುದಗಲ್ ಪಟ್ಟಣದ ಹೊರವಲಯದಲ್ಲಿ ಬಾಬಾ ಕಟ್ಟೆಯ ಸುತ್ತ ಮುತ್ತ ವಾಸಿಸುವ ಜನರು, ಜಮೀನು ಹೊಂದಿದ ರೈತರು ಸಭೆ ಸೇರಿ ಕಂಕರ ಯಂತ್ರಗಳನ್ನು ಇಲ್ಲಿ ಅಳವಡಿಸಲು ಸರ್ಕಾರ ನೀಡಿರುವ ಆದೇಶವನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಲು ಸಭೆ ಸೇರಿ ವಿರೋಧ ವ್ಯಕ್ತಪಡಿಸಿದರು.
ಇದರಿಂದಾಗಿ ಜನ ಜೀವನಕ್ಕೆ ತೊಂದರೆಯಾಗುತ್ತದೆ. ರೈತರ ಜಾನುವಾರುಗಳು ಮೇಯಿಸಲು ಜಾಗೆ ಇಲ್ಲದಂತಾಗುತ್ತದೆ. ಅನೇಕ ರೋಗಗಳಿಂದ ಜನ ತತ್ತರಿಸುವಂತಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರೈತ ರಾಮಣ್ಣ ಹೀರೇಮನಿ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ಆರೋಪಿಸಿದರು.
ಮುದಗಲ್ ಪಟ್ಟಣದ ಸುಮಾರು 2000 ಕೂಲಿಕಾರರು ಜಲ್ಲಿ ಕಲ್ಲು ಒಡೆದು ಜೀವನ ಸಾಗಿಸುತ್ತಿದ್ದಾರೆ. ಅವರನ್ನು ಒಕ್ಕಲೆಬ್ಬಿಸಿದಂತಾಗುತ್ತದೆ. ಕಂಕರ ಮಾರಿ ಜೀವನ ಸಾಗಿಸುವ ಜನರು ದೂರದ ಊರುಗಳಿಗೆ ಗುಳೆ ಹೋಗುವಂತೆ ಮಾಡಿದಂತಾಗುತ್ತದೆ. ಸರ್ಕಾರ ಜನರಿಗೆ ಕೆಲಸ ನೀಡುವ ಬದಲಾಗಿ ಅವರನ್ನು ಒಕ್ಕಲೆಬ್ಬಿಸುವ ಸಂಚು ಇದಾಗಿದೆ. ಆದ್ದರಿಂದ ಕಂಕರ ಯಂತ್ರಗಳನ್ನು ಅಳವಡಿಸಲು ಪರವಾಣಿಗೆ ನೀಡಿರುವುದನ್ನು ರದ್ದುಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿಯೋಗ ಹೋಗಿ ಮನವಿ ಮಾಡಲು ಸಿದ್ಧರಾಬೇಕು ಎಂದು ತಿಳಿಸಿದರು.
ಜನತೆಯ ಹಿತ ಕಾಪಾಡುವ ಬದಲಾಗಿ ಅಧಿಕಾರಿಗಳು ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದು, ಕಾನೂನು ಹೋರಾಟಕ್ಕು ಸಿದ್ಧರಾಗುವುದಾಗಿ ರೈತರು ಸಭೆಯಲ್ಲಿ ನಿರ್ಧರಿಸಿದರು.
ಸಭೆಯಲ್ಲಿ ಮುಖಂಡರಾದ ಚಂದಾವಲಿ, ಪ.ಪಂ. ಸದಸ್ಯರಾದ ಬಂದೆನವಾಜ, ಖಾಜಾಪಾಷಾ, ಪ.ಪಂ. ಮಾಜಿ ಉಪಾಧ್ಯಕ್ಷ ಹುಸೇನಸಾಬ್ ಕಲೇಗಾರ, ಸೈಯ್ಯದಸಾಬ್, ಶರೀಫ ಸಾಬ್ ಜಂಬಾಳೆ, ಸತೀಶ ವಡ್ಡರ ಸೇರಿದಂತೆ ಎರಡು ನೂರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.
ಪಂಪಯ್ಯ ಮಠ